Posts

Showing posts from April, 2013

ಬದುಕಿನ ಹವಣಿಕೆ

ಕಂಡ ಕನಸೆಲ್ಲವೂ ಕಲ್ಲಾದವು ಬಂದ ನೆನಪೆಲ್ಲವೂ ಮರೆಯಾದವು ಗೊಂದಲದ ಬದುಕಲ್ಲಿ ಆಯ್ಕೆಯೇ ಮುಳ್ಳಾದವು ಕನಸ ಕಾಣಲಾರೆನಾ ನೆನಪ ಬಯಸಲಾರೆನಾ ಬಂದ ಜೀವನವ ಬದುಕ ಹೊರತು ವಿಧಿಯಿಲ್ಲಯೆನಗೆ ಬಂದ ಆಸೆಗಳ ಬಿಡದ ಹೊರತು ಬಿಡುವಿಲ್ಲವೆನಗೆ ಸಾಗುತಿಹುದು ಪಯಣ ಮುಂದೊಂದು ಪಯಣದೆಡೆಗೆ ಬೆಳೆಯುತಿಹುದು ಆಸೆಯ ಭಂಡಾರ ಆಗಸದೆಡೆಗೆ ನಿಲ್ಲಿಸಲಾಗದು ಪಯಣ ಅದು ಪ್ರಕೃತಿ ತಡೆಯಲಾಗದು ಆಸೆ ಅದೊಂದು ಆಷಾಡಭೂತಿ ಆಸೆ ನಿಂತೊಡನೆ ಪಯಣ ಮುಗಿವುದು ಪಯಣ ನಿಂತೊಡನೆ ಬದುಕು ಮುಗಿವುದು ಬಂದ ಜನರೆಲ್ಲ ನಿಂತರು ಮನದ ಹೊಸ್ತಿಲಲಿ ತೆರೆದ ಕದವ ದಾಟಿದವರಿಲ್ಲ ದಾಟಿದವ ಮನದೊಳಗೆ ಉಳಿಯಲಿಲ್ಲ ಒಂಟಿನಾನಾಗಿರುವೆ ಬದುಕ ಆಟದಲಿ ಹುಡುಕಾಟ ಪಯಣಿಗನಿಗೆ ಬದುಕ ಪಥದಲಿ ಸಾಧನೆಯ ಛಲಕೆ ಬೇಕಿಂದು ಮನವು ಮನಸಿನ ಹಾದಿಯಲಿ ನೂರೆಂಟು ವಿಘ್ನ ಕನಸಿನ ಕಲ್ಪನೆಗೆ ಸಿಗಲಿಲ್ಲ ಬಿಂಬ ಕಾರಣವು ನೂರು ಅಡಚಣೆಯ ಹೆಸರಿಗೆ ಗೆಲ್ಲುವವನೊಬ್ಬನೇ ತನ್ನ ಗೆದ್ದವ ಗೆಲ್ಲುವವನೊಬ್ಬನೇ ತನ್ನ ಗೆದ್ದವ

ಯುಗದ ಆದಿ ಯುಗಾದಿ

Image
ಯುಗದ ಆದಿ ಮೊಳಗಿದೆ, ಯುಗದ ಆದಿ ಮೊಳಗಿದೆ, ವಸಂತವ ತಂದಿದೆ ಮನಕೆ, ಹೊಸತನಕೆ ಯುಗದ ನಾಂದಿ ಹಾಡಿದೆ. ಹೊಸ ಸಾಧನೆಗಳು ಚಿಗುರಿದೆ, ಹೊಸ ಭಾವನೆಗಳು ಉಕ್ಕಿದೆ, ಹೊಸ ಕಾರುಣ್ಯವು ಹರಿದಿದೆ, ಬಂದಿದೆ ಬಂದಿದೆ ಯುಗದ ಆದಿ ಮೊಳಗಿದೆ. ಸಮರಸವ ಕಲಿಸಿದೆ, ಸಹ್ಷ್ಣುತೆಯ ಬೆಳಸಿದೆ, ಕಾಮನನು ದಹಿಸಿದೆ, ಪೊರೆದಿದೆ ಪೊರೆದಿದೆ ಯುಗದ ಆದಿ ಮೊಳಗಿದೆ. ಜೀವನವು ಬೆಳಗಿದೆ, ಮನಗಳು ಅರಳಿವೆ, ಉತ್ಸಾಹವು ಚಿಮ್ಮಿದೆ, ಬೆಳಸಿದೆ ಬೆಳಸಿದೆ ಯುಗದ ಆದಿ ಮೊಳಗಿದೆ. ಮಾಯೆಯು ಹೆಚ್ಚಿದೆ, ಮನವು ನಂಬಿದೆ, ಅಜ್ಞಾನವ ಕಳೆವ ಬೆಳಕು ಹರಿದಿದೆ, ಉದಿಸಿದೆ ಉದಿಸಿದೆ ಹೊಸತು ಯುಗವೊಂದು ಉದಿಸಿದೆ.