ನಾನಿರುವೆನು ನಿನ್ನ ಜೊತೆ


ಕನ್ನಡವೇ ನೀನೇಕೆ ಸೊರಗಿರುವೇ?
ನಾನಿರುವೆನು ನಿನ್ನ ಜೊತೆ

ತಾಯ ಗರ್ಭದಲಿ ಕಿವಿ ತಮಟೆ ತಟ್ಟಿದಾ ಪ್ರಣವ ನೀನೇ
ಸ್ವರಗಳೇ ಮಜ್ಜೆಯಾಗಿ ವ್ಯಂಜನಗಳೇ ಮಾಂಸವಾಗಿಹವು ನನ್ನಲಿ
ಹೃದಯದಿ ಪ್ರಾಣಾಂಕುರವಾಗುವ ಮುನ್ನ ನೀ ಆವರಿಸಿದ್ದೆ ಪೂರ್ತಿ ನನ್ನ
ನಿನ್ನ ರೂಪವೇ ನನ್ನ ಈ ಜನ್ಮದಾ ಅಸ್ಮಿತೆ
ನೀನು ನಾನಾಗಿ ನಾನೇ ನೀನಾಗಿರುವಾಗ
ನೀನೇಕೆ ಮರೆಯಾಗಿರುವೇ? ನಾನಿರುವೆನು ನಿನ್ನ ಜೊತೆ

ನನ್ನ ದುಃಖದಾ ಆರ್ದತೆ ನೀನೇ
ನಕ್ಕಾಗ ಬೊಬ್ಬಿರಿದ ಹಾಸ್ಯ ನೀನೇ
ಭಯದೋತ್ತರದ ಚೀತ್ಕಾರ ನೀನೇ
ಕಡುಕೋಪದಿಂದ ಉಸುರಿದ ಅಗ್ನಿ ಜ್ವಾಲೆಯೂ ನೀನೇ
ನೆಲೆಸಿದಾ ಶಾಂತಿಯ ಮಾರ್ಧವತೆಯೂ ನೀನೇ
ನೀನೇಕೆ ನಿರ್ಭಾವವಾಗಿರುವೇ? ನಾನಿರುವೆನು ನಿನ್ನ ಜೊತೆ

ತಾಯಿಯಾ ಆರೈಕೆಯಾ ಪ್ರೀತಿ ನೀನು
ತಂದೆಯಾ ಶಿಕ್ಷಣದ ಬುದ್ದಿ ನೀನು
ಅಜ್ಜ ಅಜ್ಜಿಯರ ಆಶ್ರಯದ ಪರಂಪರೆ ನೀನು
ಬಂಧುಗಳ ಬಂಧನದಾ ಗೀಳು ನೀನು
ವಿಶ್ವಾಸದ ಸ್ನೇಹದಾ ಸೇತು ನೀನು
ನೀನೇಕೆ ಏಕಾಂಗಿ? ನಾನಿರುವೆನು ನಿನ್ನ ಜೊತೆ

ಗಣಿತದಾ ಅಗಾಧತೆಯ ಕಲಿಸಿದ್ದು ನೀನೇ
ವಿಜ್ಞಾನದ ವೈಖರಿಯ ಪರಿಚಯಿಸಿದ್ದೂ ನೀನೇ
ಸಮಾಜದ ಸಂಭ್ರಮವ ಉಣಿಸಿದ್ದೂ ನೀನೇ
ನೂರು ಭಾಷೆಗಳ ಅರ್ಥೈಸಿದ ಅರಿವು ನೀನೇ
ನನ್ನೆಲ್ಲಾ ಜ್ಞಾನದ ಮೂಲ ನೀನೇ
ನೀನೇಕೆ ಕಳಾಹೀನವಾರಿರುವೇ? ನಾನಿರುವೆನು ನಿನ್ನ ಜೊತೆ

ಅಗಸ್ತ್ಯ ಮುನಿವರೇಣ್ಯರ ಅರ್ಚಿಸಿದ ಪೂಜ್ಯೆ ನೀನು
ಜನಕನಿಗೆ ಮಳೆಯುಣಿಸಿದಾ ಗಂಗೆ ನೀನು
ಪಾಂಡವರಿಗೆ ಆಶ್ರಯವಿತ್ತ ಗೃಹಲಕ್ಷ್ಮಿಯೂ ನೀನು
ಕದಂಬ ಚಾಲುಕ್ಯ ಪುಲಕೇಶಿಯ ಸಾರ್ವಭೌಮತ್ವದ ಸಾಕ್ಷಿ ನೀನು
ಹಕ್ಕಬುಕ್ಕರಿಂದೊಡಗೂಡಿ ಹಿಂದೂ ಸಾಮ್ರಾಜ್ಯವ ಸ್ಥಾಪಿಸಿದ ವಿಜಯಿ ನೀನು
ಯುಗಯುಗಗಳು ಕೊಂಡಾಡಿಹವು ನಿನ್ನ ಸಾಧನಾ ವೈಭವವ
ನೀನೇಕೆ ದರಿದ್ರಳು? ನಾನಿರುವೆನು ನಿನ್ನ ಜೊತೆ

ಪರತಂತ್ರ್ಯದಲಿ ಮೊದಲು ಸ್ವತಂತ್ರ್ಯವಾ ಹಂಬಲಿಸಿದ ಚೆನ್ನಮ್ಮ ನೀನೇ
ಸಾಹಿತ್ಯದಾ ಸುಧೆ ಹರಿಸಿದ ಆದಿ ಕವಿಯು ನೀನೇ
ಸಂಗೀತ ಸಾಮ್ರಾಜದಾ ಮೇರು ಮುಕುಟ ನೀನೇ
ರಾಷ್ಟ್ರ ಸೈನ್ಯಕೆ ದಿಶೆತೋರಿದಾ ಕಾವೇರಿಯು ನೀನೇ
ಹೊಸತನಕೆ ಸದಾ ಒಗ್ಗುವಾ ನವ ಚೈತನ್ಯ ನೀನೇ
ಜಗಕೆಲ್ಲಾ ಗುರುವಾಗೋ ಭಾರತವ ಮುನ್ನೆಡೆಸೋ ಮಹಾಯೋಗಿ ನೀನೇ
ನೀನೇಕೆ ದಿಕ್ಕೆಟ್ಟವಳು? ನಾನಿರುವೆನು ನಿನ್ನ ಜೊತೆ

ಕನ್ನಡವೇ.... ನೀನೇಕೆ ಸೊರಗಿರುವೇ?
ನಾನಿರುವೆನು ನಿನ್ನ ಜೊತೆ

Comments

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ