ಶ್ರೀ ಶಂಕರಮ್ ಲೋಕ ಶಂಕರಮ್                                                                                                       
ಭಾರತ ಇತಿಹಾಸದಲ್ಲಿ ನಾವುಗಳು ಅದೆಷ್ಟೋ ವೀರರನ್ನು,ವೈರಾಗಿಗಳನ್ನು,ಸಾಹಸಿಗರನ್ನು,ದೇಶಭಕ್ತರನ್ನು ನೋಡಿದ್ದೇವೆ. ಆದ್ಯಾತ್ಮ ಜಗತ್ತಿಗೇ ಕಳಸಪ್ರಾಯವಾದ ಭಾರತ,ಜಗತ್ತಿಗೆ ಅದೆಷ್ಟೋ ಮಂದಿ ರ್ದಾರ್ಶನಿಕರನ್ನು,ಪಂಡಿತರನ್ನು,ಸಂತರನ್ನು ನೀಡಿದೆ. ಆದರೆ ಆ ಎಲ್ಲಾ ಮಹಾತ್ಮರಲ್ಲಿ ಮೇರು ಪರ್ವತದಂತಿರುವವರು ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾರ್ಚಾರ್ಯರು. ಬಾಲ್ಯದ ಐದನೇ ವಯಸ್ಸಿನಲ್ಲಿ ಉಪನಯನ,ಎಂಟನೇ ವಯಸ್ಸಿನಲ್ಲಿ ವೇದ,ಮೀಮಾಂಸ,ಶಾಸ್ತ್ರಗಳಲ್ಲಿ ಪಾಂಡಿತ್ಯ,ಹನ್ನೆರಡನೇ ವಯಸ್ಸಿನಲ್ಲಿ ಜಗತ್ತು ಮಿತ್ಯವೆಂದು ಅರಿತು ವೈರಾಗ್ಯದಿಂದ ಸಂನ್ಯಾಸ ಸ್ವೀಕರಿಸಿದ ಮಹಾನುಭಾವರು ಶ್ರೀ ಶಂಕರ ಭಗವದ್ಪಾದರು. ಶ್ರೀ ಶಂಕರಾರ್ಚಾರ್ಯರ ಇಡೀ ಜೀವನ ಮಾನವ ಜನಾಂಗದ ಉದ್ದಾರಕ್ಕಾಗಿಯೇ ಮುಡಿಪಾಗಿತ್ತು. ವೇದೋಪನಿಷತ್ಗಳಲ್ಲಿರುವ ಸಾರವನ್ನು ಸಾಮಾನ್ಯ ಜನರಿಗೆ ಅರ್ಧವಾಗುವಂತೆ ಆಡು ಭಾಷೆಯಲ್ಲಿ ಹೇಳಿ ಜೀವನ ದರ್ಶನ ಮಾಡಿಸಿದ ಮಹಾನುಭಾವರು ಶ್ರೀ ಶಂಕರಾರ್ಚಾರ್ಯರು.ಶ್ರೀ ಶಂಕರರ ಇಡೀ ಜೀವನವೇ ಈಗಿನ ಜನಾಂಗಕ್ಕೆ ಆದರ್ಶಪ್ರಾಯವಾದುದು.
ಒಬ್ಬ ಸಂನ್ಯಾಸಿಯ ಜೀವನದಿಂದ ಲೌಕಿಕ ಜೀವನ ನಡೆಸುತ್ತಿರುವ ನಮ್ಮಂತಹ ಜನರಿಗೆ ಉಪಯೋಗವೇನು? ಇದು ಎಷ್ಟೋ ಮಂದಿ ಜನರಲ್ಲಿ ಹುಟ್ಟವ ಪ್ರಶ್ನೆ. ಆದರೆ ಶ್ರೀ ಶಂಕರರು ಬಾಳಿದ ಪ್ರತಿ ಕ್ಷಣಗಳೂ ದೇಶದ ಜನರ ಅಭಿವೃದ್ದಿಗಾಗಿಯೇ ದುಡಿದರು. ಮನುಷ್ಯನ ಜೀವನ ಸುಖಮಯವಾಗಿರಬೇಕಾದರೆ ಆತ ಧರ್ಮಾಚರಣೆಯನ್ನು ಮಾಡಬೇಕು ಎಂಬುದನ್ನು ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಪದೇ ಪದೇ ಹೇಳಿದ್ದಾನೇ. ಆದರೆ ಸಾಮಾನ್ಯ ಜನರು ಧರ್ಮಾಚರಣೆಯನ್ನು ಮಾಡುವುದರಲ್ಲಿ ತಪ್ಪುತ್ತಾ,ಇನ್ನಾವುದೋ ಧರ್ಮವನ್ನು ಆಚರಿಸುತ್ತಾ ಹೋದರು. ಆಗ ಶ್ರೀ ಶಂಕರರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ರುದ್ರನಂತೆ ಸಂಚರಿಸಿ ಸನಾತನ ಹಿಂದು ಧರ್ಮವೆಂದರೇನು,ಅದರ ಮೂಲೋದ್ದೇಶವೇನು,ಯಾವುದಕ್ಕಾಗಿ ಧರ್ಮಾಚರಣೆ, ಎಂಬುದನ್ನು ಜನರಿಗೆ ಮನದಟ್ಟು ಮಾಡಿಸಿದರು. ಶ್ರೀ ಶಂಕರರ ಕಾಲಘಟ್ಟದಲ್ಲಿ ಇಡೀ ಭಾರತದಲ್ಲಿ ಬೌಧ್ದ ಮತ ಪ್ರಚಾರದಲ್ಲಿತ್ತು,ಮತ್ತು ರಾಜಮಹಾರಾಜರುಗಳು ಅದನ್ನು ಪ್ರಾಚಾರ ಮಾಡುವುದರಲ್ಲಿ ಸಹಾಯ ಮಾಡುತ್ತಿದ್ದರು. ಜೀವನದಲ್ಲಿರುವುದೆಲ್ಲಾ ದುಃಖಕ್ಕೆ ಕಾರಣ ಜೀವನದಲ್ಲಿ ಸಂತೋಷವೆಂಬುದಿಲ್ಲ, ಸಂತೋಷವೂ ದುಃಖಕ್ಕೆ ಕಾರಣ ಎಂಬ ಬೌದ್ದರ ವಾದವನ್ನು ತಮ್ಮ ತತ್ವದಿಂದ ಮಣಿಸಿ ಪರಮಾನಂದದ ಮಹತ್ವವನ್ನು,ಮತ್ತು ಅದನ್ನು ಪಡೆಯುವ ದಾರಿಯನ್ನು ಜನರಿಗೆ ತಿಳಿಸಿದವರು ಸಂನ್ಯಾಸಿಗಳಾದ ಶ್ರೀ ಶಂಕರರು.
ಜಗತ್ತಿನ ಪ್ರತಿ ವಸ್ತುವೂ ಆ ಪರಬ್ರಹ್ಮನೇ,ಪ್ರತಿಯೋಂದು ಜೀವಿಯಲ್ಲಿರುವುದು ಆ ಪರಬ್ರಹ್ಮನೇ ಎಲ್ಲರೂ ಒಂದೇ ಎಂದು ಐಕ್ಯತೆಯನ್ನು ಮೆರೆದವರು ಶ್ರೀ ಶಂಕರರು. ಇದಕ್ಕೆ ಶ್ರೀ ಶಂಕರರ ಜೀವನದಲ್ಲಿ ಅದೆಷ್ಟೋ ಉದಾಹರಣೆಗಳಿವೆ. ಒಮ್ಮೆ ಒಬ್ಬ ಚಾಂಡಾಲ ಶ್ರೀ ಶಂಕರರ ಎದುರಿಗೆ ಬಂದ ಶ್ರೀ ಶಂಕರರು ಅತ್ತ ಹೋಗು ನಾವು ಹೋಗಬೇಕು ಎಂದು ಹೇಳಿದಾಗ ಚಾಂಡಾಲನಾಗಿ ಬಂದಿದ್ದ ಈಶ್ವರನು ಶ್ರೀ ಶಂಕರರಿಗೆ ನೀನು ಯಾರನ್ನು ಬದಿಗೆ ಹೋಗೆಂದು ಹೇಳುತ್ತಿರುವುದು ದೇಹವನ್ನೋ ಅಧವಾ ಆತ್ಮವನ್ನೋ, ಆತ್ಮವನ್ನಾದರೆ ನನ್ನಲ್ಲಿ ನಿನ್ನಲ್ಲಿ ಇರುವ ಆತ್ಮವೊಂದೆ ದೇಹವಾದರೆ ಅದು ನಶ್ವರ ಎಂದು ಕೇಳಿದಾಗ ಶ್ರೀ ಶಂಕರರು ಬ್ರಹ್ಮವಿದ್ಯೆಯನ್ನರಿತ ಚಾಂಡಾಲನಾಗಿದ್ದರೂ ಸರಿ ಪಂಡಿತನಾಗಿದ್ದರೂ ಸರಿ ಆತ ನನಗೆ ಗುರು ಎಂದು ಆ ಚಾಂಡಾಲ ವೇಷಧಾರಿಯಾದ ಈಶ್ವರನ ಕಾಲನ್ನು ಮುಟ್ಟಿ ನಮಸ್ಕರಿಸಿ, ವಿದ್ಯೆಯ,ಜ್ಞಾನದ,ಸಮಾನತೆಯ ಮಹತ್ವವನ್ನು ಜಗತ್ತಿಗೇ ಸಾರಿದವರು ಶ್ರೀ ಶಂಕರಾಚಾರ್ಯರು. ಹೀಗೆ ಶ್ರೀ ಶಂಕರರು ತಮ್ಮ ತತ್ವ,ಚಿಂತನೆಗಳ ದಾರಿಯಲ್ಲಿ ನೆಡೆಯುತ್ತಲೇಹೋದರು.
ಶ್ರೀ ಶಂಕರರು ಕರುಣಾಮಯಿ.ಶ್ರೀ ಶಂಕರರಿಗೆ ತೋಟಕ ಎಂಬ ಶಿಷ್ಯರಿದ್ದರು,ಅವರು ಕೇವಲ ಗುರು ಶುಶ್ರೂಷೆಯಲ್ಲಿಯೇ ನಿರತರಾಗಿರುತ್ತಿದ್ದರು. ಒಮ್ಮೆ ಶ್ರೀ ಶಂಕರರು ಉಳಿದ ಶಿಷ್ಯರಿಗೆ ಪಾಠ ಹೇಳಲು ಸಿದ್ದತೆ ಮಾಡಿಕೊಳ್ಳುವಾಗ ಶ್ರೀ ಶಂಕರರು ಎಲ್ಲಾ ಸ್ವಲ್ಪ ತಡೆಯಿರಿ ತೋಟಕನು ಬರಲಿ ಎಂದರು. ಅವರ ಶಿಷ್ಯರಲ್ಲೊಬ್ಬರು ಆತ ಕಲ್ಲು ಬಂಡೆಯಂತೆ ಪಾಠ ಪ್ರವಚನಗಳು ಆತನಿಗೆ ಅರ್ಧವಾಗುವುದಿಲ್ಲ ಅವನ ಬರುವಿಕೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದರು. ಆಗ ಕರುಣಾಮಯಿ ಶ್ರೀ ಶಂಕರರು ಮನಸ್ಸಿನಲ್ಲಿಯೇ ತೋಟಕಾರ್ಚಾರ್ಯರಿಗೆ ಹದಿನಾಲ್ಕು ವಿದ್ಯೆಯು ಬರಲಿ ಎಂದು ಆರ್ಶೀವದಿಸಿದರು ನಂತರ ಬಂದ ತೋಟಕರು ಬ್ರಹ್ಮವಿದ್ಯೆಯನ್ನು ಸಾರುವ ಶ್ಲೋಕಗಳನ್ನು ಹೇಳುತ್ತಾ ಬಂದರು, ಹೀಗೆ ತೋಟಕರು ಶ್ರೀ ಶಂಕರರ ದಯೆಯಿಂದ ತೋಟಕಾರ್ಚಾರ್ಯರಾದರು. ಆತ್ಮನೊಂದೇ ಸತ್ಯ ಎಂದು ಸಾರಿದ ಶ್ರೀ ಶಂಕರರಿಗೆ ಒಮ್ಮೆ ಒಬ್ಬ ಮಂತ್ರವಾದಿ ವಾಮಾಚಾರವನ್ನು ಮಾಡಿ ಫಿಸ್ತುಲಾ ಎಂಬ ಕಾಯಿಲೆಯುಂಟಾಗುವಂತೆ ಮಾಡಿದ ಹಲವು ಔಷದ್ಯೋಪಚಾರವನ್ನು ಮಾಡಿದ ನಂತರವು ಕಾಯಿಲೆ ಗುಣವಾಗದಿದ್ದಾಗ ಶ್ರೀ ಶಂಕರರ ಶಿಷ್ಯರಲ್ಲೊಬ್ಬರಾದ ಪದ್ಮಪಾದಾರ್ಚಾರ್ಯರು ಅವರ ಶಕ್ತಿಯಿಂದ ಕಾಯಿಲೆಯ ಜಾಡನ್ನು ಹಿಡಿದಾಗ ವಾಮಾಚಾರದಿಂದ ಎಂದು ತಿಳಿಯಿತು ಆಗ ಆ ಮಂತ್ರವಾದಿಗೆ ಆ ವಾಮಾಚಾರವನ್ನು ತಿರುಗಿಸಲು ಅನುಮತಿಯನ್ನು ಕೇಳಿದಾಗ ಶ್ರೀ ಶಂಕರರು ಈ ದೇಹವೆಂಬುದು ನಶ್ವರ ಆದ್ದರಿಂದ ಈ ಕಾಯಿಲೆಯಿಂದ ನನಗೆ ಯಾವ ಭಾಧೆಯು ಇಲ್ಲ ಆ ಮಂತ್ರವಾದಿಗೆ ಹಾನಿಮಾಡಬೇಡ ಎಂದು ಪದ್ಮಪಾದಾರ್ಚಾರ್ಯರಿಗೆ ಹೇಳಿ ನೋವಿನಲ್ಲೂ ಮಾನವತೆಯನ್ನು ಮೆರೆದ ಮಹಾನುಭಾವರು ಶ್ರೀ ಶಂಕರರು.ಹೀಗೇ ಹೇಳುತ್ತಾ ಹೋದರೆ ಶ್ರೀ ಶಂಕರರ ಜೀವನ ಮಹಾ ಭೋಧಿ ವೃಕ್ಷದಂತೆ ನಮಗೆ ಪರಿಪರಿಯಾಗಿ ಜೀವನ ದರ್ಶನ ಮಾಡಿಸುತ್ತದೆ.ಶ್ರೀ ಶಂಕರರ ಪ್ರವಚನಗಳು ಇಡೀ ಭಾರತವನ್ನು ಒಂದು ಮಾಡುವ ಕಡೆಗೆ, ಒಂದೇ ತತ್ವ ಚಿಂತನೆಯಡಿಯಲ್ಲಿ ಸಾಗುವಂತೆ ಮಾಡಿ ಇಡೀ ದೇಶವನ್ನೇ ಒಗ್ಗೂಡಿಸಿ ಸನಾತನ ಹಿಂದೂ ಧರ್ಮವೆಂಬ ಸುಧೆಯನ್ನು ಜಗತ್ತಿಗೇ ನೀಡಿದೆ. ಅವರ ಕವಿತ್ವದ ಪ್ರೌಢತೆಯನ್ನು ಗಮನಿಸಿದರೆ “ಆಕಾಶಕ್ಕೆ ಆಕಾಶವೇ ಸರಿಸಾಟಿ ಸಮುದ್ರಕ್ಕೆ ಸಮುದ್ರವೇ ಸರಿಸಾಟಿ ಶ್ರೀ ಶಂಕರರಿಗೆ ಶ್ರೀ ಶಂಕರರೇ ಸರಿಸಾಟಿ” ಎಂಬುದು ನಮಗೆ ತಿಳಿದು ಬರುತ್ತದೆ. ಸೌಂದರ್ಯ ಲಹರಿ,ಭಾಷ್ಯಸೂತ್ರಗಳು,ಶಿವಾನಂದಲಹರಿ,ಗಣಪತಿ ಪಂಚರತ್ನಗಳು,ಕನಕಧಾರ ಸ್ತೋತ್ರ ಹೀಗೆ ಎಲ್ಲಾ ದೇವರನ್ನು ಸಮವಾಗಿ ಸ್ತುತಿಸಿ ಪರಬ್ರಹ್ಮ ತತ್ವದೋಂದಿಗೆ ಲೀನವಾಗುವ ಭಾಗ್ಯವನ್ನು ಶ್ರೀ ಶಂಕರರು ಇಡೀ ಜಗತ್ತಿಗೇ ನೀಡಿದ್ದಾರೆ. ಇಂತಹ ಮಹಾನುಭಾವರನ್ನು ಸ್ತುತಿಸುವುದು ಮತ್ತು ಅವರ ಕಾರ್ಯಗಳನ್ನು ಸದಾ ಸ್ಮರಿಸುತ್ತಿರುವುದೇ ನಮ್ಮ ಬಾಳಿನ ಭಾಗ್ಯೋದಯ. ಈ ನಿಟ್ಟಿನಲ್ಲಿ ಈ ಲೇಖನದಿಂದ ಭಾರತಾಂಬೆಯ ಪುತ್ರರಾದ ಶ್ರೀ ಶಂಕರರ ಒಂದು ಕಿರು ಪರಿಚಯವನ್ನು ಮಾಡುವ ಒಂದು ಸಣ್ಣ ಪ್ರಯತ್ನ. ಈ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಗದ್ಗುರುಗಳಾದ ಶ್ರೀ ಶಂಕರಾರ್ಚಾರ್ಯರನ್ನು ನೆನೆಯುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಷಯಗಳು.


                    “ಶ್ರುತಿ ಸ್ಮ್ರುತಿ ಪುರಾಣಾನಾಲಯಮ್ ಕರುಣಾಲಯಮ್ ಶ್ರೀ ಶಂಕರಮ್ ಲೋಕ ಶಂಕರಮ್”     

Comments

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ