ಮಲಗೇ ಇದ್ದಾರೆ ನನ್ನ ಜನ


ಅಂದು ನಿದ್ರಿಸಿದ ಜನ ಇನ್ನೂ ಮಲಗೇ ಇದ್ದಾರೆ
ಬೆಳಗು ಕಳೆಯಿತು,ರಾತ್ರಿ ಕಾಡಿತು,ಭೂತ ಸುತ್ತಿತು
ಪಿಶಾಚಿ ಅರಚಿತು,ನಾಯಿ ಗೀಳಿಟ್ಟಿತು,
ಇನ್ನೂ ಮಲಗೇ ಇದ್ದಾರೆ ನನ್ನ ಜನ

ಊರ ಕಳ್ಳ ಊರನ್ನೇ ದೊಚಿದ
ಮನೆಯವ ಮನೆಯನ್ನೇ ಮುರಿದ
ಆಳುವವ ತುಳಿದ,ಬೇಡುವವ ಮಡಿದ ಮಡಿದವ ಸತ್ತ
ಇನ್ನೂ ಮಲಗೇ ಇದ್ದಾರೆ ನನ್ನ ಜನ

ಇನ್ನೂ ಮಲಗೇ ಇದ್ದಾರೆ ಕನಸ ಹೆಣೆಯುತ
ಹರಿದ ಹಾಸಿಗೆ,ಅರಿವೆಯ ಹೊದಿಕೆ,
ದೊಡ್ಡ ರಂಧ್ರದ ಮಾಳಿಗೆ,ಚಿಕ್ಕ ಬೆಳಕಿನ ಆಸರೆ
ಮೂಲೆಯಲ್ಲೆಲ್ಲೋ ಪುಸ್ತಕದ ಗೊಡವೆ,
ಗೊಡವೆಯಲ್ಲೊಂದಿಷ್ಟು ಇಲಿಜಿರಲೆ
ಬಾಗಿಲನೂ ತೆರೆಯದೆ ಇನ್ನೂ ಮಲಗೇ ಇದ್ದಾರೆ ನನ್ನ ಜನ

ಮುರಿದು ಬಿದ್ದಿದೆ ನಮ್ಮನ್ನು ಎತ್ತಬೇಕಾದ್ದು,
ಹರಿದು ಹರಡಿದೆ ನಮ್ಮನ್ನು ಪೋಶಿಸ ಬೇಕಾದ್ದು,
ಕೂಗಿ ಕರೆದಿದೆ ಆರದ ಗಜಗಟ್ಟಲೇ ನಿಕ್ಷೇಪ,
ಕೇಳುವವರಿಲ್ಲ,ನೋಡುವವರಿಲ್ಲ,ಮಾಯೆಯಲಿ ಮುಳುಗಿ
ಮಲಗೇ ಇದ್ದಾರೆ ನನ್ನ ಜನ ಇನ್ನೂ ಮಲಗೇ ಇದ್ದಾರೆ

ರಾಜನಾಗುವ ಆಸೆ,ಕಾಂಚಣವ ಕಾಮಿಸುವಾಸೆ,
ಜೀವನವ ದೂಡುವಾಸೆ,ಅನ್ನವ ದೋಚುವಾಸೆ
ಪರದೇಶಿಗಳಿಗೆ ದಾಸನಾಗುವಾಸೆ,ವಿದ್ಯೆ ಮಾರುವಾಸೆ
ರಕ್ತ ಹೀರುವಾಸೆ,ಬೆನ್ನೆಲುಬಿಗೇ ಮೆಟ್ಟುವಾಸೆ
ಇನ್ನೂ ನಿದ್ರಿಸುವಾಸೆ ಅರಿವೆಯ ಸರಿಮಾಡಿ ಇನ್ನೂ ನಿದ್ರಿಸುವಾಸೆ

ಎಬ್ಬಿಸಿದವರ ನೋಡು,ಮಾರ್ಗದರ್ಶಿಸಿದವರ ನೋಡು,
ಸತ್ಯ ತೋರಿಸಿದವರ ನೋಡು,ಇತಿಹಾಸ ತತ್ವವ ನೋಡು
ನಿನ್ನ ಮಂಪರ ಹೊರದೂಡು
ಕಣ್ಣಹಾಯಿಸು ಹಿಂದೋಂದು ಸಲ,ಮುಂದೋಂದು ಸಲ
ಘರ್ಜಿಸು ಮುಕ್ತ ಕಂಠದಲಿ,ಸಪ್ತ ಸಮುದ್ರ ದಾಟಲಿ
ಆಕಾಶ ಚಿಕ್ಕದಾಗಿ,ದಿಗ್ದಿಗಂತದಲಿ ಹರಡಲಿ ನಿನ್ನ ಕೂಗು
ಶೃತಿ ಸೇರಿದ ಆ ಸನಾತನ ಕೂಗು,
ನಿನ್ನ ಆ ಸನಾತನ ಕೂಗು


Comments

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ